ಶ್ರೀ ರಾಮ ಭಾರತೀಯ ಸಂಸ್ಕೃತಿಯಲ್ಲಿ ಬಿಂಬಿಸಿರುವ ಆದರ್ಶಗಳ ಪ್ರತೀಕ. ಎಲ್ಲಿ ರಾಮನೋ ಅಲ್ಲಿ ಹನುಮನಿದ್ದಾನೆ ಎಂಬುದು ನಮ್ಮ ನಂಬಿಕೆ. ಈ ನಂಬಿಕೆಗೆ ಪುಷ್ಟಿಕೊಡುವಂತಿದೆ ವಾಯುಪುತ್ರನ ಬಗ್ಗೆ ರಾಮರಕ್ಷಾಸ್ತೋತ್ರದಲ್ಲಿರುವ ೩೪ ನೇ ಶ್ಲೋಕ:
मनोजवं मारुततुल्यवेगं
जितेन्द्रियं बुद्धिमतां वरिष्ठम् |
वातात्मजं वानरयूथमुख्यं
श्रीरामदूतं शरणं प्रपद्ये ||
ಭಾವಾರ್ಥ: ಮನೋಜವನು (ಮನಸ್ಸಿನಷ್ಟು ಜವವುಳ್ಳವನು) ಮಾರುತತುಲ್ಯವೇಗವುಳ್ಳವನು (ಗಾಳಿಗೆ ಸಮಾನವಾದ ವೇಗ ಹೊಂದಿರುವವನು) ಜಿತೇಂದ್ರಿಯನು (ಇಂದ್ರಿಯಗಳನ್ನು ಜಯಿಸಿದವನು) ಬುದ್ಧಿವಂತರಲ್ಲಿ ವರಿಷ್ಠನಾದವನು ವಾಯುಪುತ್ರನು ವಾನರರಲ್ಲಿ ಪ್ರಮುಖನು ಶ್ರೀರಾಮದೂತನು ಆದವನನ್ನು ಶರಣು ಹೋಗುತ್ತೇನೆ.
ಪ್ರತಿಬಾರಿ ಈ ಶ್ಲೋಕ ಪಠಿಸುವಾಗ ‘ಹೊರಗೆ ಕಾಣುವಷ್ಟು ಸರಳವೇ ಈ ಶ್ಲೋಕ?’ ಎಂಬ ಜಿಜ್ಞಾಸೆ. ಇಲ್ಲಿ ಬರುವ ಹನುಮನ ವಿಶೇಷನಾಮಗಳು ನಮ್ಮ ಮನಸ್ಸನ್ನು ಪ್ರತಿಬಿಂಬಿಸುತ್ತಿದೆಯೆ? ಆದರ್ಶಗಳ ಪ್ರತೀಕವಾದ ರಾಮ ನಮ್ಮ ಬುದ್ಧಿಶಕ್ತಿಯನ್ನು, ಅತ್ಮಶಕ್ತಿಯನ್ನು ಪ್ರತಿನಿಧಿಸುತ್ತಾನೆಯೇ? ಹನುಮನಿಗೆ ಹೇಗೆ ತನ್ನ ಶಕ್ತಿಯ ಬಗ್ಗೆ ಮರೆವು ಇದೆಯೋ, ಹಾಗೆಯೇ ಎಷ್ಟೋ ಬಾರಿ ನಾವೂ ನಮ್ಮ ಸಾಮರ್ಥ್ಯ ಮರೆತು ಮಂಕಾಗಿ ಕುಳಿತುಕೊಳ್ಳುತ್ತೇವಲ್ಲ? ಮನಸ್ಸು ಬುದ್ಧಿಗೆ ಶರಣಾಗಿರಬೇಕು ಎಂದು ತಿಳಿದವರು ಹೇಳುತ್ತಾರೆ. ಅಂತೆಯೇ ಹನುಮನು ರಾಮನಿಗೆ ಶರಣಾದವನು!
ಜಿಜ್ಞಾಸೆ ಹಾಗೆಯೇ ಇದೆ…
ನಿನ್ನೆ ಹನುಮಜ್ಜಯಂತಿ. ಕಳೆದ ವರ್ಷ ಬೆಂಗಳೂರಿನ ರಾಮಾಂಜನೇಯ ದೇವಸ್ಥಾನದಲ್ಲಿ ಸೆರೆ ಹಿಡಿದ ಈ ಪ್ರಾಣಸ್ನೇಹಿತರ ನೆನಪಲ್ಲಿ ಈ ಅಂಚೆ…
I am Sharing a photo clicked @ Shree Ramanjaneya Temple, Gavipuram, BengaLuru